ಮೈಸೂರುಮಠ, ಎಸ್ ಜಿ (ಶಿರಾಳಕೊಪ್ಪ ಗುರುಬಸವಯ್ಯ ಮೈಸೂರುಮಠ )1925-2005. ಕನ್ನಡ ಮತ್ತು ಇಂಗ್ಲಿಷ್ ಭಾಷಾಪತ್ರಿಕೋದ್ಯಮದಲ್ಲಿ ಐದು ದಶಕಗಳ ಅವಿಶ್ರಾಂತವಾಗಿ ದುಡಿದವರು. == ಆರಂಭಿಕ ಬದುಕು == ಇವರು ಹುಟ್ಟಿದ್ದು 1925ರಲ್ಲಿ ದಾವಣಗೆರೆಯಲ್ಲಿ, ತಂದೆ ಗುರು ಬಸವಯ್ಯ, ತಾಯಿ ಚೆನ್ನವೀರಮ್ಮ. ವಿದ್ಯಾಭ್ಯಾಸ ಶಿರಾಳಕೊಪ್ಪ, ಶಿವಮೊಗ್ಗ, ದಾವಣಗೆರೆ ,ಬಿಜಾಪುರ ಮತ್ತು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಗ ಆ ಕಾಲೇಜು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸೇರಿತ್ತು. ಇವರು ಅದೇ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ ಓದುವ ವೇಳೆಗೆ ಕರ್ನಾಟಕ ಕಾಲೇಜು, ವಿಶ್ವವಿದ್ಯಾನಿಲಯವೇ ಆಯಿತು. == ಪತ್ರಿಕಾರಂಗದಲ್ಲಿನ ಸೇವೆ == ಲಂಡನ್ನಿನ ಥಾಂಸನ್ ಫೌಂಡೇಶನ್ನಿನಲ್ಲಿ ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದಿದ್ದ, ಈ ಇಂಗ್ಲಿಷ್ ಸ್ನಾತಕೋತ್ತರ ಪದವೀಧರ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದ್ದು ಕನ್ನಡ ಪತ್ರಿಕೋದ್ಯಮದ ಮೂಲಕ. ಹುಬ್ಬಳ್ಳಿಯ ವಿಶಾಲಕರ್ನಾಟಕ, ದೈನಿಕ ಪ್ರಪಂಚ ವಾರಪತ್ರಿಕೆ, ಜಯಕರ್ನಾಟಕ ಮಾಸ ಪತ್ರಿಕೆಗಳಲ್ಲಿ ಆರಂಭ ಕಾಲದ ದುಡಿಮೆ. ಅನಂತರ ಬೆಂಗಳೂರಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಧಾನ ವರದಿಗಾರರಾಗಿ 25 ವರ್ಷಗಳ ಸೇವೆ. ನಿವೃತ್ತಿಯ ನಂತರ `ಅಮೃತ ಬಜಾರ್ ಪತ್ರಿಕೆಯ ವಿಶೇಷ ಬಾತ್ಮಿದಾರ. ಸಂಯುಕ್ತ ಕರ್ನಾಟಕದ 'ಅಂತರ-ಅನಂತರ ಅಂಕಣಕಾರರು. ಮಕ್ಕಳಿಗಾಗಿ ಬರೆದ `ದಲಿತಮಾಮರ ಒಂದು ಉಪಯುಕ್ತ ರಚನೆ. ಅವರ ಇತರ ಪ್ರಕಟಣೆಗಳು; ಹಣ್ಣಿನ ಕುಯಿಲು, ಶಿವನ ಡಂಗುರ. ಶಿವನ ಡಂಗುರಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮನೆಯೊಡೆಯನಿದ್ದಾನೊ-ಅಂಕಣ ಬರೆಹಗಳ ಸಂಗ್ರಹ ಅವರ ಮರಣೋತ್ತರ ಪ್ರಕಟಣೆ. ಬೆಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸೆನೆಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಗಳಾದ ವೀರಪ್ಪಮೊಯಲಿ ಅವರ ಪತ್ರಿಕಾ ಕಾರ್ಯದರ್ಶಿಯಾಗಿ ಮತ್ತು ಪತ್ರಿಕಾ ಅಕಾಡೆಮಿ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ. 2000 ಸಾಲಿನ ಟಿಯೆಸ್ಸಾರ್ ಪ್ರಶಸ್ತಿಗೆ ಭಾಜನರಾದರು. == ರಂಗಭೂಮಿ ಮತ್ತು ಚಿತ್ರರಂಗಗಳಲ್ಲಿ ಕಲಾವಿದರಾಗಿ == ಮೈಸೂರುಮಠ ಅವರದು ಬಹುಮುಖ ಪ್ರತಿಭೆ. ರಂಗಭೂಮಿಯ ಕಲಾವಿದರೂ ಕೂಡ. ಹಂಸಗೀತೆ, ಕರಾವಳಿ, ಸದಾನಂದ ಮುಂತಾದ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. == ಮರಣ == ಮೈಸೂರುಮಠ ಡಿಸೆಂಬರ್ 8, 2005ರಂದು ವಿಧಿವಶರಾದರು.